Chief Editor
Manohar. R (Manu)
Photo Journalist
chitrataramanu@gmail.com
+91 9845549026
ನಂದಿಕೋಲೂರಲ್ಲಿ ಪವಾಡ ಮಾಡಿದ ಕರಟಕ ದಮನಕ -- ರೇಟಿಂಗ್ : 4/5 ****
Posted date: 09 Sat, Mar 2024 02:59:34 PM
`ಕರಟಕ ದಮನಕ`  ಉತ್ತರ ಕರ್ನಾಟಕದ ನಂದಿಕೋಲೂರಲ್ಲಿ ನಡೆಯುವ ಕಥೆ. ಹತ್ತಾರು ವರ್ಷಗಳಿಂದ  ಮಳೆ ಬಾರದೆ ಬರಗಾಲದಿಂದ ಕಂಗೆಟ್ಟು, ಜನರೆಲ್ಲ ಗುಳೆಹೋಗಿ ಊರ ಜಾತ್ರೆಯೇ ನಿಂತು ಹೋಗಿದ್ದ  ಆ ಊರಿಗೆ ಬಂದ  ಯುವಕರಿಬ್ಬರು ಹೇಗೆ ಊರಲ್ಲಿ ಮತ್ತೆ ಜಾತ್ರೆ ನಡೆಯುವಂತೆ ಮಾಡಿದರು, ಊರೆಲ್ಲ ಕೆರೆ ನೀರಿಂದ ತುಂಬುವಂತೆ ಮಾಡಿದರು ಎಂಬುದನ್ನು  ನಿರ್ದೇಶಕ ಯೋಗರಾಜ ಭಟ್ಟರು ಈ ಚಿತ್ರದಲ್ಲಿ ನಿರೂಪಿಸಿದ್ದಾರೆ. ಕಳ್ಳತನ‌ ಮಾಡಿಕೊಂಡಿದ್ದ  ಶಿವಣ್ಣ ಹಾಗೂ ಪ್ರಭುದೇವ ಅವರನ್ನು ಆ ಊರಿಗೆ ಕಳಿಸಿದ್ದು ಜೈಲರ್ ರುದ್ರೇಶ್(ರಾಕ್ ಲೈನ್ ವೆಂಕಟೇಶ್). ಕಳ್ಳತನದಿಂದ ಮಾಡುವುದು, ಇತರರನ್ನು ಯಾಮಾರಿಸುವುದನ್ನೇ ಜೀವನ ಎಂದುಕೊಂಡಿದ್ದ  ಇಬ್ಬರು  ಚಾಣಾಕ್ಷ  ಕಳ್ಳರು, ಹಾಳೂರಾಗಿದ್ದ ನಂದಿಕೋಲೂರನ್ನು ಹೇಗೆ  ಸಮೃದ್ದಿಯ ನೆಲೆವೀಡಾಗಿಸಿದರು, ನೀರು ಬರಿಸಿ ಬಗೀರಥರಾದರು ಎಂಬುದನ್ನಿಲ್ಲಿ  ಭಟ್ಟರು ರಂಜನೀಯವಾಗಿ ಹೇಳಲು ಪ್ರಯತ್ನಿಸಿದ್ದಾರೆ.  ಕಳ್ಳತನವೇ ಶ್ರೇಷ್ಠ ಎಂದು ನಂಬಿದ ವಿರೂಪಾಕ್ಷಿ(ಶಿವರಾಜ್‌ಕುಮಾರ್) ಮತ್ತು ಬಾಲರಾಜು(ಪ್ರಭುದೇವ) ಮಾತುಗಳಿಂದಲೇ ಯಾರನ್ನು ಬೇಕಾದರೂ ನಂಬಿಸುವಂಥವರು. ಜೈಲಲ್ಲಿ ನಡೆದ ಘಟನೆಯೊಂದರಿಂದ ಇವರ ಬುದ್ದಿವಂತಿಕೆ ಅರಿತ  ಜೈಲರ್ ರುದ್ರೇಶ್ ಇವರಿಗೆ  ಒಂದು ಕೆಲಸವನ್ನು ಒಪ್ಪಿಸಿ ನಂದಿಕೋಲೂರಿಗೆ ಕಳಿಸುತ್ತಾನೆ.  ಆದರೆ ವಿರೂಪಾಕ್ಷಿ ಹಾಗೂ  ಬಾಲರಾಜು ನಂದಿಕೋಲೂರಿಗೆ ಹೋಗಿದ್ದೇ  ಬೇರೆ ಕೆಲಸಕ್ಕೆ, ಆದರೆ ಅಲ್ಲಿ ನಡೆಯುವುದೇ ಬೇರೆ ಕಥೆ.  
 
ಆ ಊರಲ್ಲಿ  ನೀರಿಗಾಗಿ ಪರದಾಡುತ್ತಿರುವ ಜನತೆ, ನೀರಿಗಾಗಿ ನಡೆಯೋ ರಾಜಕೀಯ. ಏನೇ ಕಷ್ಟ ಬಂದರೂ ಇದೇ ನನ್ನೂರು ಎಂದು  ಕಷ್ಟದಲ್ಲೇ  ಜೀವನ ಸಾಗಿಸೋ  ಒಂದಿಷ್ಟು ಹಳೇ ಜನ. ಇಂತಹ ಊರಿಗೆ ಕರಟಕ ದಮನಕದಂತಹ ಕುತಂತ್ರಿಗಳಿಬ್ಬರು  ಎಂಟ್ರಿ ಕೊಟ್ಟಾಗ, ಆ ಊರಲ್ಲಿ ಏನಾಗುತ್ತೆ? ಅನ್ನೋದೇ ಈ ಸಿನಿಮಾದ ಕಥೆ. 
 
ನೀರು, ಬೇರು, ತೇರು ಈ ಮೂರು ಅಂಶಗಳ ಮೇಲೆ ಈ  ಚಿತ್ರದ ಕಥೆ ನಿಂತಿದೆ.  ಶಿವಣ್ಣ ಹಾಗೂ ಪ್ರಭುದೇವ ಇಬ್ಬರೂ ಒಬ್ಬರಿಗೊಬ್ಬರು ಸ್ಪರ್ಧೆ ನೀಡುವಂತೆ ಅಭಿನಯಿಸಿದ್ದಾರೆ.
 
ಇವರ ನಟನಾ ಸಾಮರ್ಥ್ಯದ ಬಗ್ಗೆ  ಮಾತಾಡುವ ಹಾಗಿಲ್ಲ. ಶಿವಣ್ಣ  ಅವರ ಎನರ್ಜಿಟಿಕ್ ಪರ್ಫಾರ್ಮನ್ಸ್ ಈ  ಚಿತ್ರದ ಹೈಲೈಟ್.   ಇನ್ನೊಂದೆಡೆ ಪ್ರಭುದೇವ  ತನ್ನ ಡಾನ್ಸ್ ಅಭಿನಯದಿಂದ ಪ್ರೇಕ್ಷಕರ ಮನ ಗೆಲ್ಲುತ್ತಾರೆ. ಹಾಸ್ಯದ ಸನ್ನಿವೇಶಗಳಲ್ಲಿ ಸಖತ್  ಮಿಂಚಿದ್ದಾರೆ.  ಡಾನ್ಸ್, ಹಾಡುಗಳಲ್ಲಿ ಕಿಂಗ್ ಅನ್ನೋದನ್ನು ಮತ್ತೊಮ್ಮೆ  ಸಾಬೀತುಪಡಿಸಿದ್ದಾರೆ. ನಾಯಕಿಯರಾದ ಪ್ರಿಯಾ ಆನಂದ್ ಹಾಗೂ ನಿಶ್ವಿಕಾ ನಾಯ್ಡು ಇಬ್ಬರಿಗೂ ಹಳ್ಳಿ ಹುಡುಗಿಯರ ಗೆಟಪ್ ಚೆನ್ನಾಗಿ ಒಪ್ಪಿದೆ.  ಅದರಲ್ಲೂ  ನಿಶ್ವಿಕಾ ನಾಯ್ಡು ಅವರ ಪರ್ ಫಾರ್ಮನ್ಸ್ ಅದ್ಬುತ, ಇವರ ಪಾತ್ರವನ್ನು  ಭಟ್ಟರು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ. ಉಳಿದಂತೆ ಮುಖ್ಯಮಂತ್ರಿ ಚಂದ್ರು, ರಂಗಾಯಣ ರಘು ಹೀಗೆ ಬಂದು ಹಾಗೆ ಹೋಗುತ್ತಾರೆ.  ದೊಡ್ಡಣ್ಣ ಕೂಡ ಇನ್ನೊಬ್ಬ ಕಳ್ಳ.  ಉತ್ತರ ಕರ್ನಾಟಕದ ಜಗ್ಗನ ಪಾತ್ರದಲ್ಲಿ ರವಿಶಂಕರ್ ಮಿಂಚಿದ್ದಾರೆ. ತೆಲುಗು ಚಿತ್ರರಂಗದ ಹಿರಿಯ ನಟ ತನಿಕೆಲ್ಲ ಅಬರಣಿ ಕನ್ನಡಿಗರಿಗೆ ಇಷ್ಟ ಆಗುತ್ತಾರೆ. ಉಳಿದಂತೆ ಕಾಮಿಡಿ ಕಿಲಾಡಿಗಳ ಜೀಜಿ, ಮೂಗು ಸುರೇಶ್ ಅಭಿನಯ ಉತ್ತಮವಾಗಿದೆ.  ಶಿವಣ್ಣ ಹಾಗೂ ಪ್ರಭುದೇವ  ಇಬ್ಬರ ಕಾಂಬಿನೇಷನ್ನೇ ಈ ಚಿತ್ರದ ಹೈಲೈಟ್,  ವಿ ಹರಿಕೃಷ್ಣ  ಅವರ  ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿರುವ   ಡೀಗ ಡಿಗರಿ, ಡೀಗ ಡಿಗರಿ ಹಾಗೂ ಹಿತ್ತಲಕ ಕರಿಬ್ಯಾಡ ಮಾವ ಪ್ರೇಕ್ಷಕರನ್ನು ಸಖತ್ ರಂಜಿಸುತ್ತವೆ.  ಜೊತೆಗೆ  ಹಿನ್ನೆಲೆ ಸಂಗೀತ ಕೂಡ ಚೆನ್ನಾಗಿದೆ. ಅದಕ್ಕೆ ತಕ್ಕಂತೆ ನೃತ್ಯ ನಿರ್ದೇಶನ ಕೂಡ ಸೊಗಸಾಗಿದೆ.  ಸಂತೋಷ್ ರೈ ಪಾತಾಜೆ  ಅವರ ಕ್ಯಾಮರಾದಲ್ಲಿ ಉತ್ತರ ಕರ್ನಾಟಕದ ಗ್ರಾಮೀಣ  ಸೊಬಗು ಸೆರೆಯಾಗಿದೆ.  ಪ್ರಸ್ತುತ ಕರ್ನಾಟಕದ ಜನರು ಎದುರಿಸುತ್ತಿರುವ ಸಮಸ್ಯೆಯೊಂದರ ಬಗ್ಗೆಯೇ ಈ ಸಿನಿಮಾ ಹೆಚ್ಚು ಮಾತನಾಡುವುದು ವಿಶೇಷ. ಜೈಲರ್  ರುದ್ರೇಶ್ ಪಾತ್ರದಲ್ಲಿ  ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಸಖತ್ ಮಿಂಚಿದ್ದಾರೆ. ಅಲ್ಲದೆ ದಿವ್ಯದೃಷ್ಟಿಯುಳ್ಳ ಯೋಗಿಯ ಪಾತ್ರದಲ್ಲಿ  ಯೋಗರಾಜ್ ಭಟ್  ಅವರ  ಅಭಿನಯ ಗಮನ ಸೆಳೆಯುತ್ತದೆ.

 

Kannada Cinema's Latest Wallpapers
Kannada Cinema's Latest Videos
Kannada Movie/Cinema News - ನಂದಿಕೋಲೂರಲ್ಲಿ ಪವಾಡ ಮಾಡಿದ ಕರಟಕ ದಮನಕ -- ರೇಟಿಂಗ್ : 4/5 **** - Chitratara.com
Copyright 2009 chitratara.com Reproduction is forbidden unless authorized. All rights reserved.